ನನ್ನವಳ

ಪ್ರೀತಿ ಅಂದ್ರ

ಕೊಚ್ಚಿನ್

ಮಳೆ ಇದ್ದಾಂಗ

ಒಂದು ಘಳಿಗೆ

ಧೋ ಎಂದು ಸುರಿದು

ಮತ್ತ...ತಿರುಗಾ

ಒಣಾ ಬಿಸಿಲು. !!!

ಅವಲಕ್ಕಿ ಪವಲಕ್ಕಿ

ಅವಲಕ್ಕಿ
ಪವಲಕ್ಕಿ
ಕಾಂಚನ
ಮಿಣ ಮಿಣ
ಡಾಮ್ ಡೂಮ್
ಟಸ್ ಪುಸ್
ಕೊಯ್ ಕೊಟರ್

ಇದರ ಸಾರಾಂಶ ಹೀಗಿದೆ:
ಈ ಜನಪದ ಹಾಡು ಭೂಮಿಯ ಮೇಲೆ ಮನುಶ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.ಅವಲಕ್ಕಿ - ಮನುಶ್ಯ ಚಿಕ್ಕವನಿದ್ದಾಗ ಅವಲಕ್ಕಿ ತಿನ್ನುತ್ತಾನೆಪವಲಕ್ಕಿ - ದೊಡ್ಡವರಾಗುತ್ತಾ ಪಾವಕ್ಕಿಯನ್ನು ತಿನ್ನುತ್ತಾನೆಕಾಂಚನ - ಯುವಕನಾಗಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆಮಿಣ ಮಿಣ - ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆಡಾಮ್ ಡೂಮ್ - ನಂತರ ಅವನ ಮದುವೆ ಟಸ್ ಪುಸ್ - ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್; ಏಕೆಂದರೆ ಮಕ್ಕಳು ಹೇಳುವುದನ್ನಲ್ಲವೇ ದೊಡ್ಡವರು ಕೇಳುವುದು ಕೊಯ್ ಕೊಟರ್ - ನಂತರ ವ್ಯಕ್ತಿಯ ಮರಣ

Honey ಕವಿತೆ

ಸ್ತ್ರೀ ಸ್ವಾತಂತ್ರ್ಯದ ಬಗ್ಗೆಬರೆವ ಹುಡುಗಿ,
ಬೇರಾರದೋ ಮನೆಯಲಿದ್ದೇನೆ,
ಅವರೆದುರು ಮಾತಾಡಲು
ಒಂಥರಾ ಅನ್ನುವಕಾರಣಕ್ಕೆ ಫೋನು
ರಿಸೀವ್ ಮಾಡಲಿಲ್ಲ.


ಗೆಜ್ಜೆಗಳೆಂದರೆ ರೋಮಾಂಚನ,
ಮಧುರಪ್ರೇಮ ಸಂಕೇತ
ಅಂತ ಕವಿತೆ ಬರೆಯುವ ಹುಡುಗ
ಕದ್ದು ಸೇರುವಾಗ
ಅವಳ ಬಳಿ"ಗೆಜ್ಜೆ ತೆಗೆದಿಡುಸದ್ದಾಗುತ್ತದೆ" ಅಂದ.

ತೂತಿನಾಚಿಗೆ ಏನು
ನಡೆಯುತ್ತಿದೆ ಅಂತ ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,ಇನ್ನೊಂದು ಕಣ್ಣು ಕಂಡಿತು!

:-)

ಒಂದೇ ವಸ್ತು ಮೂರು ಕತೆ

ಕತೆ ೧:

ರಾಜಕುಮಾರ. ರಾತ್ರಿ ಮಲಗಿದಾಗ ಆತನ ಕೋಣೆಯಲ್ಲಿರುವ ದೀಪದ ಮೊಲ್ಲೆ ವಿಗ್ರಹಕ್ಕೆ ಜೀವ ಬಂದು ಆತನನ್ನು ಸೇರುತ್ತಾಳೆ. ರಾಜಕುಮಾರನಿಗೆ ದೀಪದ ಮೊಲ್ಲೆಯನ್ನಲ್ಲದೇ ಯಾವ ಹುಡುಗಿಯನ್ನೂ ಕಣ್ಣೆತ್ತಿ ನೋಡಲಾರ. ಆತನ ತಾಯಿ ಯಾರ್ಯಾರಿಗೋ ಕೇಳಿ, ಕೊನೆಗೆ ರಾಜಕುಮಾರನನ್ನೇ ತುಂಡರಿಸಿ ಎರಡು ಭಾಗ ಮಾಡಿ ಎರಡು ಮಡಿಕೆಗಳಲ್ಲಿ ಹೂತು ಹಾಕುತ್ತಾರೆ. ಒಂದರಿಂದ ರಾಜಕುಮಾರ ಬರುತ್ತಾನೆ. ಇನ್ನೊಂದರಿಂದ ದೀಪದ ಮೊಲ್ಲೆ ಬರುವುದಿಲ್ಲ, ಬದಲಿಗೆ ಕಾಳಿಂಗ ಹೊರಬರುತ್ತದೆ. ಜನ ಕಾಳಿಂಗನನ್ನು ಹೊಡೆಯಲು ಹೊರಡುತ್ತಾರೆ, ಕಾಳಿಂಗ ತಪ್ಪಿಸಿಕೊಂಡು ಕಾಡು ಸೇರುತ್ತಾನೆ. ರಾಜಕುಮಾರ ವಿಡಿಯಿಲ್ಲದೇ ತಾಯಿ ಹೇಳಿದ ಹುಡುಗಿಗೆ ತಾಳಿ ಕಟ್ಟಿ, ಊರೂರು ಸುತ್ತತೊಡಗುತ್ತಾನೆ, ದೀಪದ ಮೊಲ್ಲೆಯ ಹುಡುಕಾಟದಲ್ಲಿ. ಕಾಳಿಂಗ ರಾಜಕುಮಾರನ ರೂಪ ತಾಳಿ ರಾಜಕುಮಾರನ ಹೆಂಡತಿಯೊಡನೆ ಸರಸದಲ್ಲಿ ತೊಡಗುತ್ತಾನೆ, ಆಕೆ ಗರ್ಭಿಣಿಯಾಗುತ್ತಾಳೆ. ಆಗ ರಾಜಕುಮಾರನಿಗೆ ತನ್ನ ಹೆಂಡತಿಯ ಶೀಲದ ಮೇಲೆ ಸಂದೇಹ. ಅವಳ ಪರೀಕ್ಷೆಯಾಗುತ್ತದೆ. ಅವಳು, "ನನ್ನ ಗಂಡ ಮತ್ತು ಈ ಸರ್ಪವನ್ನಲ್ಲದೇ ಬೇರೆ ಯಾವ ಗಂಡನನ್ನು ಮುಟ್ಟಿದ್ದರೂ ನನಗೆ ಈ ಸರ್ಪ ಕಚ್ಚಲಿ" ಎನ್ನುತ್ತಾಳೆ, ಗೆಲ್ಲುತ್ತಾಳೆ. ರಾಜಕುಮಾರನಿಗೆ ತಲೆ ಕೆಟ್ಟು ಅಂತಪುರಕ್ಕೆ ಪಹರೆಯಿಡುತ್ತಾನೆ. ಕಾಳಿಂಗ ಸಿಕ್ಕಿಹಾಕಿಕೊಳ್ಳುತ್ತಾನೆ. ಇಬ್ಬರಿಗೂ ಯುದ್ಧವಾಗಿ ಕಾಳಿಂಗ ಸಾಯುತ್ತಾನೆ, ಕಾಳಿಂಗ ಸಾಯುತ್ತಿದ್ದಂತೆ ರಾಜಕುಮಾರನೂ ಸಾಯುತ್ತಾನೆ. ಸಾಯುವಾಗ ಹೆಂಡತಿಗೆ ಹೇಳುತ್ತಾನೆ, "ನನ್ನಂತೆ ಈ ಹೊಟ್ಟೆಯಲ್ಲಿರುವ ಮಗುವನ್ನು ಎರಡು ಮಾಡಲು ಬಿಡಬೇಡ".

ಕತೆ ೨:

ಹಳ್ಳಿಯ ಶ್ರೀಮಂತ ಚಲುವ ಯಾವಾಗಲೂ ತನ್ನ ವೇಶ್ಯೆಯ ಹತ್ತಿರವೇ! ತಾಯಿ ತಡೆಯಲಾಗದೇ ಮಗನ ಮದುವೆ ಮಾಡುತ್ತಾಳೆ, ಏನುಪಯೋಗ? ಮನೆಯ ಹತ್ತಿರದ ಕಾಳಿಂಗವೊಂದು ಶ್ರೀಮಂತನ ರೂಪತಾಳಿ ಹೊಸ ಹುಡುಗಿಯೊಡನೆ ರತಿಕ್ರೀಡೆಯಲ್ಲಿ ತೊಡಗುತ್ತದೆ, ಆಕೆ ಗರ್ಭಿಣಿಯಾಗುತ್ತಾಳೆ. ಮೇಲಿನ ತರಹದ್ದೇ ಪರೀಕ್ಷೆ, ಗೆಲ್ಲುತ್ತಾಳೆ. ಶ್ರೀಮಂತನಿಗೆ ತಲೆ ಕೆಟ್ಟು ಅವಳ ಮೇಲೆ ಕಣ್ಣಿಡುತ್ತಾನೆ, ಕಾಳಿಂಗ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇಬ್ಬರ ಯುದ್ಧದಲ್ಲಿ, ಕಾಳಿಂಗ ಸಾಯುತ್ತಾನೆ, ಶ್ರೀಮಂತ ತನ್ನ ತಪ್ಪಿನ ಅರಿವಾಗಿ ಹೊಟ್ಟೆಯಲ್ಲಿರುವ ಮಗುವನ್ನು ತನ್ನದೆಂದು ಒಪ್ಪಿ, ಹೆಂಡತಿಯೊಡನೆ ಸುಖವಾಗಿ ಬಾಳುತ್ತಾನೆ.

ಕತೆ ೩:

ವರ್ತಕರ ವಂಶ. ಮಗನಿಗೆ ಮದುವೆಯಾಗುತ್ತಿದ್ದಂತೆ ಆತ ಊರು ಬಿಟ್ಟು ಹೋಗುತ್ತಾನೆ. ಭೂತವೊಂದು ಆತನ ವೇಷ ಧರಿಸಿ ಹೊಸ ಹೆಂಡತಿಗೆ ಗರ್ಭಧಾರಣೆ ಮಾಡುತ್ತದೆ. ಎಲ್ಲ ಮೇಲಿನೆರೆಡು ಕತೆಗಳಲ್ಲಿದ್ದಂತೇ ನಡೆದು ಹೋಗುತ್ತದೆ.

ಮೊದಲ ಕತೆಯನ್ನು ನಾಟಕದಲ್ಲಿ ಬರೆದವರು ಚಂದ್ರಶೇಖರ ಕಂಬಾರ. ಎರಡನೇ ಕತೆ ಕಾರ್ನಾಡರ "ನಾಗಮಂಡಲ". ಮೂರನೇ ಕತೆ, ಹಿಂದಿಯಲ್ಲಿ ಚಲನಚಿತ್ರವಾದ, "ಪಹೇಲಿ".ಈ ಕತೆ ಯಾಕೆ ಇಷ್ಟು ಜನರ ತಲೆ ತಿಂದು ನಾಟಕ, ಸಿನೆಮಾ ಆಯಿತು? ಭಾರತೀಯ ತತ್ವಶಾಸ್ತ್ರದಲ್ಲಿ ದೇಹ ಮತ್ತು ಆತ್ಮ, ಲೌಕಿಕ ಮತ್ತು ಅಲೌಕಿಕ, ಕಾಮ ಮತ್ತು ಪ್ರೇಮ, ರಾಜಸ ಮತ್ತು ಸಾತ್ವಿಕ ಗಳ ನಡುವಿನ ಮಸೆದಾಟ ವೇದಗಳಿಂದಲೂ ಬಂದಿದೆ, ಭಾರತದ ಮೂಲೆ ಮೂಲೆಗಳಲ್ಲಿರುವ ಜನಪದ ಕತೆಗಳಲ್ಲಿ ಕೂಡ ಈ ತಿಕ್ಕಾಟ ಕಾಣಬಹುದು. ಈ ಮೇಲಿನ ಮೂರು ಕತೆಗಳೂ ಒಂದೇ ಜಾನಪದ ಕತೆಯ ಬೇರೆ ಬೇರೆ ರೂಪಗಳು. ಆಧುನಿಕ ಸಾಹಿತ್ಯದಲ್ಲಿ, ಅದರಲ್ಲೂ ನವ್ಯ ಸಾಹಿತ್ಯದಲ್ಲಿ ಈ ತುಮುಲವನ್ನು ಮೇಲಿಂದ ಮೇಲೆ ನೋಡುತ್ತೇವೆ. ದೇಹಕ್ಕಿಂತ ಮನಸ್ಸು-ಆತ್ಮ ಮುಖ್ಯ, ಲೌಕಿಕಕ್ಕಿಂತ ಅಲೌಕಿಕ, ಕಾಮುಕ್ಕಿಂತ ಪ್ರೇಮ-ಭಕ್ತ್ತಿ, ರಾಜಸಕ್ಕಿಂತ ಸಾತ್ವಿಕ ದೊಡ್ಡದು, ಮತ್ತು ಅದರ ಹುಡುಕಾಟದಲ್ಲೇ ನಮ್ಮ ಅಭಿವೃದ್ಧಿ-ಮುಕ್ತಿ, ಮೋಕ್ಷ ಎಂಬುದು ವೈದಿಕ ನಂಬಿಕೆ. ಆದರೆ ದೇಹ, ಲೌಕಿಕ, ಕಾಮಗಳಲ್ಲಿ ಮುಕ್ತಿ ಕಾಣುವ ಚಾರ್ವಾಕರು ವೇದಕಾಲದಿಂದಲೂ ಉಲ್ಲೇಖಗೊಂಡಿದ್ದಾರೆ. ವೈದಿಕದ ಕತೆಗಳಲ್ಲಿ ಆತ್ಮ ಗೆಲ್ಲುತ್ತದೆ (ನಚಿಕೇತ), ಪ್ರೇಮ ಗೆಲ್ಲುತ್ತದೆ (ಸಾವಿತ್ರಿ). ಆದರೆ ಜನಪದ ಕತೆಗಳಲ್ಲಿ ದೇಹ ಗೆಲ್ಲುತ್ತದೆ, ಕಾಮ ಮನುಷ್ಯನ ಸಹಜ ಗುಣ ಎನ್ನುತ್ತದೆ. ಅಧುನಿಕ ಸಾಹಿತ್ಯದಲ್ಲಿ ಈ ವಿಭಜನೆಯ ಸಂಕೀರ್ಣತೆ ಈ ಮೂರು ಕತೆಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆದರೆ ಈ ಮೂರು ಕತೆಗಳಲ್ಲಿ ನನ್ನ ಆಯ್ಕೆ, ಕಂಬಾರರ "ಸಿರಿಸಂಪಿಗೆ". ನಾಟಕದ ಅಂತ್ಯದಲ್ಲಿ ದೇಹ-ಆತ್ಮದ, ಲೌಕಿಕ-ಅಲೌಕಿಕದ, ಕಾಮ-ಪ್ರೇಮದ ಅದ್ವೈತದಲ್ಲಿ ಮನುಷ್ಯ ಬದುಕಲು ಸಾಧ್ಯವಿದ್ದರೆ ಎಷ್ಟು ಚೆನ್ನಿತ್ತು ಎಂಬ ಪ್ರಶ್ನೆಯೊಂದಿಗೆ ಮುಗಿಯುತ್ತದೆ.

ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೋ

ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೋ
ಅರ್ತ್ ಬಿಟ್ಟು ವಾಟರ್ ಮೇಲೆ ಕಾರ್ಟು ಓಂಟು ಗೋ
ನನ್ನ ಬಿಟ್ಟು ನಿನ್ನ, ನಿನ್ನ ಬಿಟ್ಟು ನನ್ನ ಲೈಫು ಓಂಟು ಗೋ ಪ
ಸನ್ನು ಬರದೆ ಲೋಟಸ್ ಎಂದು ಅರಳದು
ಮೂನು ಇರದೆ ಸ್ಟಾರು ಎಂದು ನಲಿಯದು
ಲವ್ವು ಮೂಡದಿರಲು ಹಾರ್ಟು ಅರಳದು
ಹಾರ್ಟು ಅರಳದಿರಲು ಸ್ಟಾರ್ಟು ಆಗದು
ಹಾರ್ಟು ಅರಳದಿರಲು ಸ್ಟಾರ್ಟು ಆಗದು ೧
ದುನಿಯಾದಲ್ಲಿ ಗಂಡು ಹೆಣ್ಣಿಗಾಸರೆ
ಬಟ್ ಇಲ್ಲಿ ನಾನು ನಿನ್ನ ಅರೆಸ್ಟ್-ರೆ
ಕೂಡಿ ಡಿಸ್ಕೋ ಆಸೆ ಮನದಿ ಕಾದಿರೆ
ಪೀಸು ಎಲ್ಲಿ ನೀನು ಬೇರೆ ಆದರೆ
ಪೀಸು ಎಲ್ಲಿ ನೀನು ಬೇರೆ ಆದರೆ ೨

ಅವಳ ಬೆನ್ನು ನೋಡುವ ಧೈರ್ಯವಿಲ್ಲ

ಒಂದು ಮಳೆ ನಿಂತ ಮಧ್ಯಾಹ್ನಅವಳು ಸಿಕ್ಕಳು, ಅನಿರೀಕ್ಷಿತವಾಗಿ
ಆಗ ತಾನೆ ಬಂದ ಮಳೆಯಂತೆ.
ಮಾತಾಡಲಿಲ್ಲ ಇಬ್ಬರೂ, ಘಳಿಗೆ
ಅವಳ ಕಣ್ಣಲ್ಲಿ ನೀರು ಕಂಡಂತಾಯಿತು
ಘಟಿಸಿದ ಭೂತಕ್ಕೆ ಶ್ರದ್ಧಾಂಜಲಿಯೆಂಬಂತೆ
ಹೊರಟೆವು ಮುಂದೆ, ಮಾತೇನೂ ಆಡದೆ
ಹೊರಡುವ ಮುನ್ನ ಅವಳ ಕೈ ಸೋಕಿತು
ಕಳೆದ ದಿವ್ಯಗಳ ಕೊನೆ ಝಲಕಂತೆ
ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..
ಆದರೂ,ಅವಳ ಬೆನ್ನು ನೋಡುವ ಧೈರ್ಯವಿಲ್ಲ.
‘ಉತ್ತಮ ಸಮಾಜಕ್ಕಾಗಿ’ ಎಂಬ ಪಂಚಿಂಗ್ ಹಾಗೂ ಪರಿಣಾಮಕಾರಿ ಸ್ಲೋಗನ್ನನ್ನು ಹೊತ್ತುಕೊಂಡು ಕನ್ನಡದಲ್ಲಿ ಕಣ್ತೆರದದ್ದು ಟಿವಿ ೯ ಸುದ್ದಿ ಚಾನಲ್ಲು. ಇದು ಶುರುವಾಗಿ ಈಗಾಗಲೇ ತುಂಬಾ ದಿನಗಳು ಕಳೆದಿವೆ. ಈ ಸಂದರ್ಭದಲ್ಲಿ ಈ ಚಾನಲ್ಲಿನಿಂದ ಸಮಾಜ ಎಷ್ಟು ‘ಉತ್ತಮ’ವಾಗಿದೆ ಎಂಬುದನ್ನು ಪತ್ತೆಹಚ್ಚುವುದಕ್ಕೆ ನಗೆ ಸಾಮ್ರಾಟರು ತಮ್ಮ ಪತ್ತೇದಾರಿಕೆಯ ಚೇಲ ಕುಚೇಲನನ್ನು ಕಟ್ಟಿಕೊಂಡು ಅಜ್ಞಾತ ಪ್ರದೇಶಕ್ಕೆ ಪಲಾಯನಗೈದಿದ್ದಾರೆ.
‘ರಾಜಕಾರಣಿಗಳೇ ಎಚ್ಚರ..! ಮಾತಾಡುವ ಮುನ್ನ ಯೋಚಿಸಿ’ ಎಂದು ಚುನಾವಣೆಯ ಕಾವು ಜ್ವರದಂತೆ ಏರುತ್ತಿರುವ ಸಂದರ್ಭದಲ್ಲಿ ರೋಫ್ ಹಾಕುತ್ತಿರುವ ಈ ಸುದ್ಧಿ ಮಾಧ್ಯಮ ಆಶ್ವಾಸನೆಗಳನ್ನು ನೀಡುವಂತಹ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲು ತೋಳು ಮೇಲೇರಿಸುತ್ತಿದೆ. ಅವರ ಈ ಉತ್ಸಾಹ, ಆರ್ಭಟಕ್ಕೆ ಕಾರಣವನ್ನು, ಪ್ರೇರಣೆಯನ್ನೂ ಪತ್ತೆ ಹಚ್ಚಬೇಕೆಂದು ಮೂಲವನ್ನು ಹುಡುಕಿಹೊರಟ ಸಾಮ್ರಾಟ್ ಹಾಗೂ ಕುಚೇಲರಿಗೆ ಅಪಾರ ಶ್ರಮದ ನಂತರ ಉತ್ತರ ಸಿಕ್ಕೇ ಬಿಟ್ಟಿತು. ರಾಜಕಾರಣಿಗಳ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಬರೀ ಆಶ್ವಾಸನೆಗಳನ್ನು ಕೊಟ್ಟಿರೋ ಹುಶಾರ್! ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ನಿಮ್ಮ ತಲೆಗಳನ್ನು ಹಾರಿಸಿಯೇವು ಎಂದು ಬೀಗುತ್ತಿರುವುದರ ಹಿಂದಿನ ನೈತಿಕ ಶಕ್ತಿ ದೊರೆತಿರುವುದು ಇವರು ತಮ್ಮ ಆಶ್ವಾಸನೆಯಾದ ‘ಉತ್ತಮ ಸಮಾಜಕ್ಕಾಗಿ ಟಿವಿ ೯’ ನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿರುವುದೇ ಆಗಿದೆ.
ಸುದ್ದಿ ಎಂದರೆ ಅವರಿವರಿಂದ ಕೇಳಿದ್ದು, ರಾತ್ರಿ ಕಾದು ಮನೋರಂಜನೆಯ ಕಾಂಟ್ರಾಕ್ಟ್ ತೆಗೆದುಕೊಂಡ ಚಾನಲ್ಲುಗಳಲ್ಲಿ ಪ್ರಸಾರವಾಗುವ ಸುದ್ಧಿಯನ್ನು ನೋಡಿ ತಿಳಿಯುವುದು, ರಾತ್ರಿ ನಿರಾಳವಾಗಿ ನಿದ್ದೆ ಮಾಡಿ ಎದ್ದು ಬೆಳಿಗ್ಗೆ ಪೇಪರ್ ಓದುವುದು ಎಂದು ತಿಳಿದಿದ್ದ ಸಾಮಾನ್ಯ ಜನೆತೆಗೆ ಸುದ್ಧಿಯ ಬಗ್ಗೆ ಅರಿವನ್ನು ಮೂಡಿಸಿದ ಆ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಈ ಚಾನಲ್ಲು ತೆಗೆದುಕೊಂಡ ಶ್ರಮವನ್ನು ಇಲ್ಲಿ ನೆನೆಯಲೇ ಬೇಕು. ‘ಗಂಡನಿಗೆ ಹೆಂಡತಿಯ ಮೇಲೆ ಸಂಶಯ… ಕೊಲೆ’, ‘ಕರ್ನಾಟಕದವರು ಕಚಡಾಗಳು: ಮಾನ್ಯ ಮಂತ್ರಿ’, ‘ತಾಕತ್ತಿದ್ದರೆ ಹೀಗೆ ಮಾಡಿ: ಅನಾಮಿಕ’ ಎಂಬಂಥ ಫ್ಲಾಶ್, ಬ್ರೇಕಿಂಗ್ ಸುದ್ದಿಗಳನ್ನು ಅಪಾರ ಆಸಕ್ತಿಯಿಂದ ಜನರು ನೋಡಲು ಶುರುಮಾಡಿರುವುದು ಉತ್ತಮ ಸಮಾಜ ಕಟ್ಟುವ ಕೆಲಸದ ಮೊದಲ ಹಂತ. ಅದನ್ನು ಟಿವಿ ೯ ಯಶಸ್ವಿಯಾಗಿ ನಿರ್ವಹಿಸಿದೆ.
ಹಾಲಿವುಡ್ಡು, ಬಾಲಿವುಡ್ಡು, ಸ್ಯಾಂಡಲ್‌ವುಡ್ಡು, ಕಾಲಿವುಡ್ಡು ಎಂದು ಏನೇನೋ ಹೊಸ ಪದಗಳನ್ನು ಮೇಲಿಂದ ಮೇಲೆ ಹೇಳುತ್ತಾ, ಬಿಡುಗಡೆಯಾಗುವ(ಎಲ್ಲಿಂದ?) ಸಿನೆಮಾದ ನಾಯಕರನ್ನು, ಹಣ ಕೊಟ್ಟ ನಿರ್ಮಾಪಕರನ್ನು ಕರೆಸಿಕೊಂಡು ಹರಟೆ ಹೊಡೆದು ನಾಲ್ಕೈದು ಹಾಡುಗಳನ್ನು ಹಾಕಿ, ಅಡ್ವರ್ಟೈಸ್‌ಮೆಂಟಿನ ನಡುವೆ ಸಮಯ ಮಾಡಿಕೊಂಡು ಚಿತ್ರದ ದೃಶ್ಯಗಳನ್ನು ತೋರಿಸಿ ಜನರನ್ನು ರಂಜಿಸುತ್ತಾ ಜನರು ವಾಸ್ತವದ ಕಷ್ಟನಷ್ಟಗಳು, ಬೆಳೆದ ಬೆಲೆಗೆ ಬೆಲೆಯಿಲ್ಲದ ಕಂಗಾಲಾದ ರೈತ ತನ್ನ ಬವಣೆಯನ್ನು, ಹೋರಾಟದ ಯೋಜನೆಯನ್ನೆಲ್ಲಾ ಮರೆತು ಬಣ್ಣದ ಲೋಕದಲ್ಲಿ ವಿಹರಿಸುತ್ತಾ ಪಲಾಯನವಾದಿಯ ಶ್ರೇಷ್ಠ ಸ್ಥಾನವನ್ನೇರಲು ಟಿವಿ ೯ ಕೈಲಾದಷ್ಟು ನೆರವು ನೀಡುತ್ತಿರುವುದು ಅದರ ಎರಡನೆಯ ಹಂತದ ಸಾಧನೆಯ ಫಲ.
ವರ್ಷಾನುಗಟ್ಟಲೆ ಮುಂದಾಳುಗಳ ಗರಡಿಯಲ್ಲಿ ಪಳಗಿ, ಸಿದ್ಧಾಂತ-ಪ್ರತಿ ಸಿದ್ಧಾಂತಗಳನ್ನು ಅರೆದುಕುಡಿದು, ಸಮಸ್ಯೆಗಳನ್ನು ಅನುಭವಿಸುತ್ತಿರುವವರ ಹತ್ತಿರ ನೇರವಾಗಿ ಹೋಗಿ ಬೆರೆತು ಅವರ ಸಮಸ್ಯೆಯ ಮೂಲಗಳನ್ನು ಅರಿತು, ಆಳವಾದ ಅಧ್ಯಯನವನ್ನು ಮಾಡಿ, ಬೇರಿನ ಮಟ್ಟದಿಂದ ಸಂಘಟನೆಯನ್ನು ಮಾಡುತ್ತಾ ಬೆಳೆದು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ, ಚಳುವಳಿಗಳನ್ನು ಆಯೋಜಿಸುವ ನಾಯಕರು, ಮುತ್ಸದ್ಧಿಗಳಿಂದಾಗಿ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ತುಂಬಾ ದೀರ್ಘಕಾಲವನ್ನು ಅಪೇಕ್ಷಿಸುತ್ತದೆ ಎಂಬುದನ್ನು ತಮ್ಮ ‘ಆಳ’ವಾದ ಅಧ್ಯಯನದಿಂದ ಕಂಡುಕೊಂಡ ಟಿವಿ ೯ರ ನೇತಾರರು ದಿಢೀರ್ ಚಳುವಳಿಗಾರರನ್ನು ಪ್ರೋತ್ಸಾಹಿಸುವ ಕ್ರಾಂತಿಕಾರಕ ಯೋಜನೆಯನ್ನು ಹಮ್ಮಿಕೊಂಡರು. ಫಾಸ್ಟ್ ಫುಡ್, ಫಾಸ್ಟ್ ಲೈಫ್ ಸ್ಟೈಲ್ ಅಲ್ಲದೆ ಕ್ರಿಕೆಟ್ಟಿನಲ್ಲೂ ಫಾಸ್ಟಾದ ಟಿ೨೦ ಬಂದಿರುವಾಗ ಈ ಚಳುವಳಿ, ಪ್ರತಿಭಟನೆಗಳ್ಯಾಕೆ ಗಂಭೀರವಾಗಿರಬೇಕು ಎಂದು ಯೋಚಿಸಿ ಇವರು ನಾಡಿನಾದ್ಯಂತ ಹುಟ್ಟಿಕೊಂಡ ಅಸಂಖ್ಯ ವೇದಿಕೆ, ಸೇನೆ, ಪಡೆ, ದಳಗಳಿಗೆ ವಿಶೇಷ ಆದ್ಯತೆಯನ್ನು ನೀಡಿತು. ಅದರಲ್ಲೂ ಪ್ರತಿಭಟನೆಯೆಂಬುದು ಕೇವಲ ಬಾಯಿ ಮಾತಾಗಬಾರದು ‘ಕಾಯಾ’ ವಾಚಾ ಮನಸಾ ನಡೆಯಬೇಕು. ಹಾಗಾಗಿ ಸುಮ್ಮನೆ ಒಂದೆಡೆ ಕುಳಿತು ಪ್ರತಿಭಟನೆಯನ್ನು ದಾಖಲಿಸುವುದು, ಯಾರದೋ ಸಮಸ್ಯೆಗಾಗಿ ತಾವು ಉಪವಾಸ ಕುಳಿತುಕೊಳ್ಳುವುದು, ಸತ್ಯಕ್ಕಾಗಿ ಆಗ್ರಹಿಸುವುದು ಎಲ್ಲವೂ ‘ಅವೈಜ್ಞಾನಿಕ’ ಹಾಗೂ ‘ಅಪ್ರಾಯೋಗಿಕ’ ಎಂಬುದನ್ನು ಕಂಡುಕೊಂಡ ಇವರು ಮೇಜು, ಕುರ್ಚಿ, ಕಂಪ್ಯೂಟರುಗಳನ್ನು ಪುಡಿಪುಡಿ ಮಾಡುವುದನ್ನೂ, ಕಲ್ಲೆಸೆದು ಅನ್ಯಾಯ ಮಾಡುವವರ ಕೈ, ಕಾಲು, ಕಣ್ಣುಗಳಿಗಾಗಿ ‘ಆಗ್ರಹ’ ಮಾಡುವುದನ್ನು ಬೆಂಬಲಿಸಿ ಆ ‘ಹೋರಾಟ’ಗಳಿಗೆ ಪೂರ್ಣ ಪ್ರಮಾಣದ ಕವರೇಜ್ ಕೊಟ್ಟು ಉತ್ತಮ ಸಮಾಜಕ್ಕಾಗಿ ಈ ವಾಹಿನಿ ನಡೆಸುತ್ತಿರುವ ಪ್ರಯತ್ನ ಗಮನ ಸೆಳೆದಿದೆ.
ನ್ಯಾಯ, ನೀತಿಗಾಗಿ, ಅಪರಾಧ-ಶಿಕ್ಷೆ ತೀರ್ಮಾನಕ್ಕಾಗಿ ಪೋಲೀಸು, ಕೋರ್ಟುಗಳನ್ನು ನಂಬಿಕೊಂಡು ವರ್ಷಗಳ ಕಾಲ ಅಲೆದಾಡುವುದರಿಂದ ಸಮಾಜ ಕಷ್ಟ ಅನುಭವಿಸುತ್ತಿದೆ ಎಂಬುದನ್ನು ಗಮನಿಸಿದ ಟಿವಿ ಒಂಭತ್ತು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದೆ. ಮನೆಯಲ್ಲಿ ಸಿಕ್ಕ ಕಳ್ಳನನ್ನು, ವರದಕ್ಷಿಣೆಗಾಗಿ ಪೀಡಿಸಿದ ಗಂಡನ ಮನೆಯವರನ್ನು, ವಂಚನೆ ಮಾಡಿದ ಲೇವಾದೇವಿಗಾರನನ್ನು, ಕಾಮುಕ ಶಿಕ್ಷಕನನ್ನು ಜನರೇ ಬೀದಿಗೆಳೆದು ಹಿಗ್ಗಾಮುಗ್ಗಾ ಬಾರಿಸುವ, ತಾವಾಗಿ ಶಿಕ್ಷೆಯನ್ನು ತೀರ್ಮಾನಿಸುವ ಹೊಸ ಪದ್ಧತಿಯನ್ನು ಅದು ಬೆಂಬಲಿಸುತ್ತಿದೆ. ಇದರಿಂದಾಗಿ ಜನರಿಗೆ ‘ತ್ವರಿತ’ಗತಿಯಲ್ಲಿ ನ್ಯಾಯ ಸಿಕ್ಕುವುದಲ್ಲದೆ ಆರೋಪಿಗೂ ತಕ್ಕ ಶಿಕ್ಷೆ ಸಿಕ್ಕುತ್ತದೆ ಎಂಬುದು ಇವರ ವಿಚಾರ. ಹೀಗಾಗಿ ಎಲ್ಲೋ ಒಂದು ಕಡೆ ಒಬ್ಬನು ವಂಚನೆ ಮಾಡುತ್ತಿದ್ದಾನೆ ಎಂದರೆ ಜನರನ್ನು ಈ ಬಗೆಯ ಹೋರಾಟಕ್ಕೆ ಸಿದ್ಧ ಮಾಡುವಂತೆ, ‘ಇವರಿಗೇನು ಮಾಡಬೇಕು? ಜನರೇ ತೀರ್ಮಾನಿಸಬೇಕು’ ಎಂದು ಪ್ರಚೋದಿಸಿ ಅವರು ವಂಚಕನಿಗೆ ತದಕುವುದನ್ನು ಲೈವ್ ಕವರೇಜ್ ಮಾಡಿ ‘ಜನರ ತೀರ್ಮಾನ’ವನ್ನು ತೋರಿಸಿ ಕೃತಾರ್ತರಾಗುತ್ತಿದ್ದಾರೆ. ಇದೂ ಸಹ ಉತ್ತಮ ಸಮಾಜಕ್ಕಾಗಿ ಟಿವಿ ೯ರ ಕೊಡುಗೆ.
ಆತ್ಮಕಥೆಯೊಂದು ಪ್ರಕಟವಾಗಿ ಅದನ್ನು ಓದುವ ಸಮಯವಿದ್ದವರು ಓದಿ ಅದರಲ್ಲಿನ ಆಕ್ಷೇಪಾರ್ಹ ಸಂಗತಿಗಳನ್ನು ಚರ್ಚಿಸಿ ಅವುಗಳ ವಿರುದ್ಧ ಮಾತನಾಡುವ, ಉದ್ದೇಶ ಪೂರಿತವಾಗಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹಾಕುವ ಕೆಲಸಗಳು ತುಂಬಾ ಸಮಯ ತಿನ್ನುತ್ತವೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ ಎಂಬ ಸಂಗತಿಯನ್ನು ಸೂಕ್ಷವಾಗಿ ಅವಲೋಕಿಸಿದ ಈ ವಾಹಿನಿ ಆತ್ಮಕಥೆಯೊಂದು ಬಿಡುಗಡೆಯಾಗುವ ಮೊದಲೇ ಅದರಲ್ಲೇನಿದೆ ಎಂಬುದನ್ನು ದಿನವಿಡೀ ಪ್ರಸಾರ ಮಾಡಿ, ಆ ಪುಸ್ತಕವನ್ನು ನೋಡಿಯೇ ಇರದ, ಒಂದೇ ಒಂದು ಪುಟವನ್ನೂ ಓದದವರೆಲ್ಲಾ ಕೈಲಿ ಪ್ರತಿಭಟನೆಯ ‘ಅಸ್ತ್ರ’ಗಳನ್ನು ಹಿಡಿದುಕೊಂಡು ಬಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೇ ರದ್ದುಗೊಳಿಸುವಲ್ಲಿ ಯಶಸ್ವಿಯಾಗುವಲ್ಲಿ ಸಹಕರಿಸಿದ ವಾಹಿನಿ ನಿಜಕ್ಕೂ ಉತ್ತಮ ಸಮಾಜ ಕಟ್ಟುವಲ್ಲಿ ಅಪಾರ ಶ್ರಮವಹಿಸುತ್ತಿದೆ.
ಇಷ್ಟು ಸತ್ಯಗಳನ್ನು ಪತ್ತೆ ಮಾಡುವಷ್ಟರಲ್ಲಿ ಸಾಮ್ರಾಟರೂ, ಅವರ ಪತ್ತೇದಾರಿಕೆಯ ಚೇಲ ಕುಚೇಲನೂ ಸುಸ್ತು ಹೊಡೆದು ಹೋದರು. ಆದರೂ ಸುದ್ದಿಯ ಹೆಸರಿನಲ್ಲಿ ಗಲ್ಲಿ ಗಾಸಿಪ್, ‘ಹೀಗೂ, ಈಗೂ ಉಂಟೆ’, ರಸ್ತೆ ಬದಿಯ ಕ್ರಿಕೆಟ್ ಅಭಿಮಾನಿಗಳ ಆಟದ ವಿಶ್ಲೇಷಣೆಗಳು ಮುಂತಾದ ಸಾಧನೆಗಳ ಬಗ್ಗೆ ಹಾಗೂ ಅವು ಉತ್ತಮ ಸಮಾಜಕ್ಕಾಗಿ ನೀಡುತ್ತಿರುವ ಕೊಡುಗೆಗಳ ಕುರಿತು ಇನ್ನೊಮ್ಮೆ ಪತ್ತೆದಾರಿಕೆ ಮಾಡಬೇಕೆಂದು ತೀರ್ಮಾನಿಸಿದರು.